ನಾಗಾರ್ಜುನ 1 -
ಕ್ರಿಸ್ತಶಕ ಸುಮಾರು ಆರನೆಯ ಶತಮಾನದಲ್ಲಿ ಕರ್ನಾಟಕದಲ್ಲಿ ಹುಟ್ಟಿ ವಿಖ್ಯಾತನಾದ ಆಯುರ್ವೇದಾಚಾರ್ಯ. ಸಿದ್ಧರ ಪರಂಪರೆಗೆ ಸೇರಿದವ. ಜೈನ ಸಾಹಿತ್ಯದಲ್ಲಿ ಖ್ಯಾತನಾದ ವೇದಾಂತಿ. ವೈದ್ಯ ಶಾಸ್ತ್ರಜ್ಞನಾದ ಪೂಜ್ಯಪಾದನ ಸೋದರಳಿಯ. ಪಾದಲಿಪ್ತಸೂರಿಯ ಮಗ. ಪೂಜ್ಯಪಾದನಿಂದ ವಿದ್ಯೆ ಕಲಿತ. ಜನ್ಮತಃ ಜೈನನಾದರೂ ಬೌದ್ಧಮತದ ತತ್ತ್ವಗಳಲ್ಲಿ ಅಭಿರುಚಿ ಹೊಂದಿ ಬೌದ್ಧ ಮತಾವಲಂಬಿಯಾದ. ಭಾರತದ ನಾನಾ ಭಾಗಗಳಲ್ಲಿ ಹಾಗೂ ನೇಪಾಳ, ಟಿಬೆಟ್‍ಗಳಲ್ಲಿ ಸಂಚರಿಸಿ ಬೌದ್ಧಮತ ಪ್ರಚಾರ ಮಾಡಿದ. ಟಿಬೆಟ್‍ನಲ್ಲಿ ಒಂದು ಮಠದ ಅಧಿಪತಿಯಾಗಿ ಬಹುಕಾಲ ಇದ್ದು ಅನೇಕ ಗ್ರಂಥಗಳನ್ನು ರಚಿಸಿದ. ಅನಂತರ ಶ್ರೀಶೈಲದಲ್ಲಿ ನೆಲೆಸಿ ರಸಸಿದ್ಧಿಯನ್ನು ಪಡೆದುದರಿಂದ ಈತನನ್ನು ಸಿದ್ಧ ನಾಗಾರ್ಜುನನೆಂದು ಕರೆಯುವುದು ವಾಡಿಕೆಯಾಗಿದೆ. ಭಾರತೀಯ ರಸಶಾಸ್ತ್ರವನ್ನು ಕುರಿತ ರಸಕಚ್ಛಪುಟ. ಕಕ್ಷಪುಟತಂತ್ರ ಅಥವಾ ಸಿದ್ಧಚಾಮುಂಡ ಮುಂತಾದ ಗ್ರಂಥಗಳು ಈತನಿಂದ ರಚಿತವಾಗಿವೆ.
											(ಕೆ.ವಿ.ಎಸ್.ಎ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ